Cast ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಬಿಡುಗಡೆ: ಪ್ರಮುಖ ಸಮುದಾಯಗಳ ಜನಸಂಖ್ಯೆ ವಿವರ ಇಲ್ಲಿದೆ!
Cast: ರಾಜ್ಯ ರಾಜಕೀಯ ಮತ್ತು ಸಮಾಜದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಜಾತಿ ಗಣತಿ ವರದಿ ಕೊನೆಗೂ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ 2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಇದೀಗ ಅಧಿಕೃತವಾಗಿ ಪ್ರಕಟವಾಗಿದ್ದು, ಮುಂದಿನ ವಿಧಾನಗಳನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರವು ವಿಶೇಷ ಸಂಪುಟ ಸಭೆ ಕರೆಯಲು ನಿರ್ಧರಿಸಿದೆ.
50 ಸಂಪುಟಗಳ ವರದಿ: ಸಂಪುಟ ಸಭೆಯಲ್ಲಿ ಪ್ರಸ್ತುತಪಡನೆ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಅವರು ಎರಡು ದೊಡ್ಡ ಬಾಕ್ಸ್‌ಗಳಲ್ಲಿ ಈ ವರದಿಯನ್ನು ಸಭೆಗೆ ತಂದು ಮಂಡಿಸಿದರು. ಇಲಾಖೆಯ ಕಾರ್ಯದರ್ಶಿಗಳು ಸಂಪುಟ ಸದಸ್ಯರಿಗೆ ವಿವರ ನೀಡಿದ್ದು, ಇಡೀ ಪ್ರಕ್ರಿಯೆಯ ವಿಡಿಯೋ ದಾಖಲೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂದರ್ಭದಲ್ಲಿ, “ಜಾತಿ ಗಣತಿ ವರದಿಯ ಅನುಮೋದನೆ ಮತ್ತು ಮುಂದಿನ ಕ್ರಮಗಳನ್ನು ಕೈಗೊಳ್ಳುವಂತೆ ಎಐಸಿಸಿ ಹೈಕಮಾಂಡ್ ಸೂಚಿಸಿದೆ” ಎಂದು ತಿಳಿಸಿದ್ದಾರೆ.
ವಾರ್ಷಿಕ ಯೋಜನೆಗಳಿಗೆ ಮಾರ್ಗದರ್ಶನ
ಈ ವರದಿಯು ಜಾತಿ ಆಧಾರಿತ ಯೋಜನೆಗಳು, ನೀತಿ ರಚನೆ ಮತ್ತು ಬಜೆಟ್ ವಿನ್ಯಾಸಗಳಿಗೆ ದಿಕ್ಕು ತೋರಿಸಲಿದೆ. ಈ ಕಾರಣಕ್ಕಾಗಿ ಈ ವರದಿಗೆ ಭಾರೀ ಮಹತ್ವ ನೀಡಲಾಗಿದೆ. ಹಲವಾರು ವರ್ಷಗಳ ನಿರೀಕ್ಷೆಯ ಬಳಿಕ ಮೊದಲ ಬಾರಿಗೆ ಸಂಪುಟ ಸಭೆಯಲ್ಲಿ ಈ ವರದಿಯು ಬಹಿರಂಗಗೊಂಡಿದೆ.
ಪ್ರಮುಖ ಸಮುದಾಯಗಳ ಜನಸಂಖ್ಯೆ ವಿವರ:
- ಪರಿಶಿಷ್ಟ ಜಾತಿ (SC) – 1.08 ಕೋಟಿ
- ಮುಸ್ಲಿಮರು – 70 ಲಕ್ಷ
- ಲಿಂಗಾಯತರು – 65 ಲಕ್ಷ
- ಒಕ್ಕಲಿಗರು – 60 ಲಕ್ಷ
- ಕುರುಬರು – 45 ಲಕ್ಷ
- ಈಡಿಗರು – 15 ಲಕ್ಷ
- ಪರಿಶಿಷ್ಟ ಪಂಗಡ (ST) – 40.45 ಲಕ್ಷ
- ವಿಶ್ವಕರ್ಮ ಸಮುದಾಯ – 15 ಲಕ್ಷ
- ಬೆಸ್ತರು – 15 ಲಕ್ಷ
- ಬ್ರಾಹ್ಮಣರು – 14 ಲಕ್ಷ
- ಗೊಲ್ಲರು – 10 ಲಕ್ಷ
- ಮಡಿವಾಳರು – 6 ಲಕ್ಷ
- ಕುಂಬಾರರು – 5 ಲಕ್ಷ
- ಸವಿತಾ ಸಮಾಜ – 5 ಲಕ್ಷ
ಅನುಮೋದನೆ ನಂತರದ ನಿರೀಕ್ಷೆಗಳು
ಈ ವರದಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಕೆಲ ಅಂಶಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿವೆ. ಇದು ವೈಜ್ಞಾನಿಕವಲ್ಲ ಎಂಬ ಆರೋಪಗಳ ನಡುವೆ, ವರದಿಯ ಅಂಕಿ-ಅಂಶಗಳ ಆಧಾರದಲ್ಲಿ ಭವಿಷ್ಯದ ಯೋಜನೆಗಳನ್ನು ರೂಪಿಸಲು ಸರ್ಕಾರ ಸಜ್ಜಾಗಿದೆ.

ನಿರ್ಣಾಯಕ ಸಭೆ ಏಪ್ರಿಲ್ 17ರಂದು
ಈ ವಿಚಾರದ ಕುರಿತು ಸಮಗ್ರ ಚರ್ಚೆ ನಡೆಸಲು ಏಪ್ರಿಲ್ 17ರಂದು ವಿಶೇಷ ಸಂಪುಟ ಸಭೆ ನಡೆಯಲಿದ್ದು, ವರದಿಯ ಅಂಗೀಕಾರ ಹಾಗೂ ಮುಂದಿನ ಹೆಜ್ಜೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

