Post office ‘ಜ್ಞಾನ ಅಂಚೆ’ ಸೇವೆ ಆರಂಭಕ್ಕೆ ಅಂಚೆ ಇಲಾಖೆಯ ಹೊಸ ಹೆಜ್ಜೆ.!
ಭಾರತೀಯ ಅಂಚೆ ಇಲಾಖೆ Post office ಪುಸ್ತಕ ಪ್ರೇಮಿಗಳಿಗೆ ಶುಭವಾರ್ತೆ ನೀಡಿದೆ. ಪಠ್ಯಪುಸ್ತಕಗಳು ಹಾಗೂ ಸಾಹಿತ್ಯ ಪುಸ್ತಕಗಳನ್ನು ಕಳುಹಿಸಲು ವಿಶೇಷವಾಗಿ ರೂಪಿಸಲಾದ ಹೊಸ ಸೇವೆ – ‘ಜ್ಞಾನ ಅಂಚೆ’ – ಮೇ 1ರಿಂದ ದೇಶಾದ್ಯಾಂತವಾಗಿ ಪ್ರಾರಂಭವಾಗಿದೆ.
ಈ ಹೊಸ ವ್ಯವಸ್ಥೆ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಕಾಶಕರು ಹಾಗೂ ಪುಸ್ತಕಾಸಕ್ತರು ಪುಸ್ತಕಗಳನ್ನು ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಕಳುಹಿಸಬಹುದಾಗಿದೆ. ಈ ಸೇವೆ ವಿಶೇಷವಾಗಿ ಶಿಕ್ಷಣ ಸಂಬಂಧಿತ ಹಾಗೂ ಸಾಹಿತ್ಯ ಮೂಲದ ಪುಸ್ತಕಗಳಿಗಾಗಿ ಮಾತ್ರ ಮೀಸಲಾಗಿದ್ದು, ಇತರ ವಸ್ತುಗಳನ್ನು ಈ ಮೂಲಕ ಕಳುಹಿಸಲು ಅವಕಾಶ ಇರುವುದಿಲ್ಲ.
ಹಳೆಯ ಸೇವೆಗಳ ಸ್ಥಿತಿಗತಿಯ ಹಿಂದೆ ‘ಜ್ಞಾನ ಅಂಚೆ’
ಹಿಂದೆ ‘ಬುಕ್ ಪ್ಯಾಕೆಟ್’ ಹಾಗೂ ‘ಬುಕ್ ಪೋಸ್ಟ್’ ಎಂಬ ಸೇವೆಗಳ ಮೂಲಕ ಇಂತಹ ಪುಸ್ತಕಗಳ ಸಾಗಣೆ ಸಾಧ್ಯವಾಗುತ್ತಿತ್ತು. ಆದರೆ 2024ರಲ್ಲಿ ಈ ಎರಡೂ ಸೇವೆಗಳನ್ನು ರದ್ದುಪಡಿಸಲಾಗಿತ್ತು. ಇದೇ ಕಾರಣದಿಂದ ಪುಸ್ತಕ ವಿತರಕರು ಹಾಗೂ ಪ್ರಕಾಶಕರಿಂದ ಅಸಮಾಧಾನ ವ್ಯಕ್ತವಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡ ಈ ಬಗ್ಗೆ ಅಂಚೆ ಇಲಾಖೆಗೆ ಪತ್ರ ಬರೆದಿತ್ತು.
ಈ ಎಲ್ಲಾ ಅಂಶಗಳ ಬೆಳಕಿನಲ್ಲಿ ಕೇಂದ್ರ ಸರ್ಕಾರ ಇದೀಗ ಭಾರತೀಯ ಅಂಚೆ ಕಾಯ್ದೆಗೆ ತಿದ್ದುಪಡಿ ಮಾಡಿ, ‘ಜ್ಞಾನ ಅಂಚೆ’ ಎಂಬ ಹೆಸರಿನಲ್ಲಿ ಹೊಸ ಯೋಜನೆಯನ್ನು ತಂದಿದೆ.
ಜ್ಞಾನ ಅಂಚೆಯ ಪ್ರಮುಖ ನಿಯಮಗಳು
- ಕಳುಹಿಸುವ ಪಾರ್ಸೆಲ್ ಮೇಲೆ ‘ಜ್ಞಾನ ಅಂಚೆ’ ಎಂಬುದನ್ನು ಸ್ಪಷ್ಟವಾಗಿ ಬರೆದು ಇರಬೇಕು.
- ಕಳುಹಿಸುವ ವ್ಯಕ್ತಿಯ ಹೆಸರು, ವಿಳಾಸ, ಪಡೆದೆಯವನ ವಿವರ, ಹಾಗೂ ಪ್ರಕಾಶಕರ ವಿವರಗಳು ಕಡ್ಡಾಯವಾಗಿ ನಮೂದಿಸಬೇಕು.
- ಪಾರ್ಸೆಲ್‌ಗಳು ಕನಿಷ್ಟ 300 ಗ್ರಾಂ ರಿಂದ ಗರಿಷ್ಟ 5 ಕೆಜಿ ತೂಕದವರೆಗೆ ಮಾತ್ರ ಅನುಮತಿಯಾಗಿರುತ್ತದೆ.
- ಈ ನಿಯಮಗಳನ್ನು ಉಲ್ಲಂಘಿಸಿದರೆ ಪಾರ್ಸೆಲ್ ಅನ್ನು ಸಾಮಾನ್ಯ ಅಂಚೆ ಪಾರ್ಸೆಲ್ ಎಂಬಂತೆ ಪರಿಗಣಿಸಲಾಗುತ್ತದೆ ಮತ್ತು ಹೆಚ್ಚಿನ ದರ ಹಾಗೂ ದಂಡ ವಿಧಿಸಲಾಗಬಹುದು.
ಪಾಠ ಪುಸ್ತಕ ಹರಡುವಲ್ಲಿ ಹೊಸ ಆಶಾಕಿರಣ
‘ಜ್ಞಾನ ಅಂಚೆ’ ಸೇವೆ, ರಾಜ್ಯದ ಕನ್ನಡ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೂತನ ಪ್ರೋತ್ಸಾಹ ನೀಡಲಿದೆ. ವಿಶೇಷವಾಗಿ ಗ್ರಾಮೀಣ ಭಾಗಗಳಿಗೆ ಹೆಚ್ಚು ಲಾಭವಾಗಲಿದೆ ಎನ್ನುವುದು ನಿರೀಕ್ಷೆ. ಕನ್ನಡ ಪುಸ್ತಕ ಪ್ರಕಾಶಕರು ಈ ಕ್ರಮವನ್ನು ಸ್ವಾಗತಿಸಿದ್ದಾರೆ.

